ಸೀಯಸ್, ಎಮ್ಯಾನ್ಯುಯಲ್ ಜೋಸೆಫ್
1748-1836. ಫ್ರಾನ್ಸ್‍ನ ಮಹಾಕ್ರಾಂತಿಯ ಹಾಗೂ ನೆಪೋಲಿಯನ್ ಯುಗದ ಪ್ರಮುಖ ರಾಜನೀತಿಜ್ಞ ಹಾಗೂ ಕ್ರೈಸ್ತಮಠಾಧಿಪತಿ. ಇವನು ದಕ್ಷಿಣ ಫ್ರಾನ್ಸ್‍ನ ಫ್ರೆಜುಸ್‍ನಲ್ಲಿ 1748 ಮೇ 3ರಂದು ಜನಿಸಿದ. ಫ್ರಾನ್ಸಿನ ಪ್ರಮುಖ ಕ್ರಾಂತಿಕಾರರಲ್ಲಿ ಇವನೂ ಒಬ್ಬ. ರಾಜತ್ವವನ್ನು ವಿರೋಧಿಸಿ, ರಾಷ್ಟ್ರೀಯ ಸಂಸತ್ತಿನ ಹೊಸ ರಾಜ್ಯಾಂಗವನ್ನು ನಿರ್ಮಾಣ ಮಾಡಬೇಕೆಂಬ ಅಭಿಲಾಷೆಯುಳ್ಳವನಾಗಿದ್ದ. ಹೇಗ್(1975) ಹಾಗೂ ಬರ್ಲಿನ್‍ಗೆ (1978) ರಾಯಭಾರಿಯಾಗಿ ಹೋಗಿ ಕಾರ್ಯನಿರ್ವಹಿಸಿದ. 1799ರಲ್ಲಿ ಫ್ರಾನ್ಸಿನ ನಿರ್ದೇಶಕರಲ್ಲಿ ಒಬ್ಬನಾಗಿದ್ದ ಇವನು ಅನೇಕ ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಿದ. ಆದರೆ ನೆಪೋಲಿಯನ್ ಈಜಿಪ್ಟ್‍ನಿಂದ ಹಿಂದಿರುಗಿದ ಅನಂತರ ಅವೆಲ್ಲವೂ ಬದಲಾದವು. ಇವನು ಫ್ರಾನ್ಸ್‍ಗೆ ಹೊಸ ರಾಜ್ಯಾಂಗವನ್ನು ತಯಾರಿಸಿ ನೆಪೋಲಿಯನ್‍ಗೆ ನೀಡಿದ. ಅನಂತರ ಇವನು ಪ್ರಥಮ ಸೆನೆಟರ್ ಆಗಿ ಆಯ್ಕೆಗೊಂಡ. ಆದರೆ 1800ರಲ್ಲಿ ನಡೆದ ದಂಗೆಯೊಂದರಲ್ಲಿ ಸಹಾನುಭೂತಿಯಿಂದ ವರ್ತಿಸಿದ್ದರಿಂದ ನೆಪೋಲಿಯನ್ನನು ಜಾಕೋಬಿಯನ್‍ರೊಂದಿಗೆ ಇವನನ್ನೂ ಹುದ್ದೆಯಿಂದ ತೆಗೆದುಹಾಕಿದ. ಅನಂತರ ಇವನ ಸಾರ್ವಜನಿಕ ಚಟುವಟಿಕೆಗಳು ಗಮನ ಸೆಳೆಯಲಿಲ್ಲ. 1815ರಲ್ಲಿ ಇವನು ಫ್ರಾನ್ಸ್‍ನ್ನು ತೊರೆದ. ಈತ 1830 ಜುಲೈ ಕ್ರಾಂತಿಯ ಅನಂತರ ಫ್ರಾನ್ಸ್‍ಗೆ ಹಿಂದಿರುಗಿ ಈತ 1836 ಜೂನ್ 20ರಂದು ಪ್ಯಾರಿಸ್‍ನಲ್ಲಿ ನಿಧನಹೊಂದಿದ. 
											(ಕೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ